ಬ್ಯೂಟಿನಾಂಟ್, ಅಡೆಲ್ಫ್ ಫ್ರೆಡರಿಕ್	
	1903. ಜರ್ಮನಿಯ ಜೀವರಸಾಯನವಿಜ್ಞಾನಿ. 1939ರ ರಸಾಯನವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಿಕ ಸಹವಿಜೇತ, ಲಿಯೋಪಾಲ್ಡ್ ರಸೀಕಾ ಎಂಬಾತನೊಂದಿಗೆ ಹಂಚಿಕೊಂಡ. ಆದರೆ ಜರ್ಮನ್ ಸರ್ಕಾರದ ನಿರ್ಬಂಧದಿಂದಾಗಿ ಈ ಪುರಸ್ಕಾರವನ್ನು ಆಗಲೇ ಸ್ವೀಕರಿಸಲಾಗಲಿಲ್ಲ. ಲೈಂಗಿಕ ಹಾರ್ಮೋನುಗಳನ್ನು ಕುರಿತು ಮಾಡಿದ ಇವರಿಬ್ಬರ ಸ್ವತಂತ್ರ ಸಂಶೋಧನೆಗಳಿಗಾಗಿ ಈ ಬಹುಮಾನ ಪ್ರಧಾನವಾಗಿತ್ತು.

	ಬ್ರೆಮರ್ ಹೇವನ್‍ಲೆ ಎಂಬಲ್ಲಿ ಜನನ, 24-3-1903. ಮಾರ್‍ಬರ್ಗ್ ಮತ್ತು ಗಟಿಂಗೆನ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ. 1927ರಲ್ಲಿ ಡಿಗ್ರಿ ಪಡೆದು ಎ.ಪಿ. ಡೌಸ್ ಎಂಬ ಪ್ರಖ್ಯಾತ ವಿಜ್ಞಾನಿಯ ಪ್ರಯೋಗಾಲಯದಲ್ಲಿ ಕೆಲಸಕ್ಕೆ ಸೇರಿದ. (ಈತ 1928ರ ಸಾಲಿನ ನೊಬೆಲ್ ಪ್ರಶಸ್ತಿ ವಿಜೇತ). 1933ರಿಂದ ಮುಂದಕ್ಕೆ ಬ್ಯೂಟಿನಾಂಟ್ ಅನುಕ್ರಮವಾಗಿ ಬರ್ಲಿನ್, ಟ್ಯೂಬೆನ್‍ಜೆನ್, ಮ್ಯೂನಿಕ್ ಈ ಸ್ಥಳಗಳಲ್ಲಿಯ ಜೀವರಸಾಯನವಿಜ್ಞಾನ ಸಂಸ್ಥೆಯ ನಿರ್ದೇಶಕನಾಗಿ ಸೇವೆಸಲ್ಲಿಸಿದ. 1960ರಿಂದ ಮ್ಯಾಕ್ಸ್ ಪ್ಲ್ಯಾಂಕ್ ಸೊಸೈಟಿಯ ಅಧ್ಯಕ್ಷನೂ ಆಗಿದ್ದು ಪಶ್ಚಿಮ ಜರ್ಮನಿಯ ಅಂತೆಯೇ ಪ್ರಪಂಚದವೈಜ್ಞಾನಿಕ ಪ್ರಗತಿಗೆ ಗಣನೀಯ ಕಾಣಿಕೆ ನೀಡಿದ್ದಾನೆ.

	ಲೈಂಗಿಕ ಹಾರ್ಮೋನುಗಳನ್ನು ಕುರಿತ ಸಂಶೋಧನೆಗಳೇ ಇವನ ಪ್ರಧಾನ ಕಾರ್ಯವಾದರೂ ಆನುವಂಶಿಕ ಸಾಮಗ್ರಿಯ ಘಟಕವಾದ ಜೀನಿನ ಕ್ರಿಯೆಯ ಬಗ್ಗೆ 1957ರ ಅನಂತರ ತನ್ನ ಗಮನಹರಿಸಿರುವುದು ಉಂಟು. ಹಲವಾರು ಕೀಟಗಳಲ್ಲಿ ಕಂಡುಬರುವ ಕಣ್ಣಿನ ವರ್ಣದ ವ್ಯತ್ಯಯ (ಮ್ಯುಟೇಷನ್) ಉಪಾಪಚಯ ಕ್ರಿಯೆಯ ಕೆಲವು ದೋಷಗಳಿಗೆ ಸಂಬಂಧಿಸಿರುವುದೆಂದು ತೋರಿಸಿದ್ದಾನೆ. ಕಣ್ಣಿನ ವರ್ಣವ್ಯತ್ಯಯಗಳಾದ ಕೀಟಗಳಲ್ಲಿ ಟ್ರಿಪ್ಟೊಫೇನ್ ಎಂಬ ಅಮೈನೊ ಆಮ್ಲದಿಂದ ಕಣ್ಣಿನ ವರ್ಣ ಅಮೈನೊಕ್ರೋಮ್ ಸಂಶ್ಲೇಷಣೆ ಆಗದಿರುವುದೇ ಇದರ ಕಾರಣ ಎಂದು ವಿಶದೀಕರಿಸಿದ.

	ಜೀನುಗಳು ಉಪಾಪಚಯ ಕ್ರಿಯೆಯ ಮೂಲಕ ತಮ್ಮ ಪ್ರಭಾವವನ್ನು ಬೀರುತ್ತವೆ ಮತ್ತು ಜೀನ್‍ವ್ಯತ್ಯಯ ಈ ಕ್ರಿಯಯ ದೋಷವಾಗಿ ಪರಿಣಮಿಸುತ್ತದೆ ಎಂದು ಬ್ಯೂಟೆನಾಂಟನ ಸಂಶೋಧನೆಯಿಂದ ಅರಿವಿಗೆ ಬಂದಂತಾಯಿತು. 1944ರಲ್ಲಿ ತಿಳಿದುಬಂದ ಈ ವಿದ್ಯಮಾನದ ಫಲವಾಗಿ ಮುಂದೆ ಜಾರ್ಜ್ ವೆಲ್ಸ್ ಬೇಡಲ್ ಒಂದೇ ಜೀನ್-ಒಂದೇ ಕಿಣ್ವ ಎಂಬ ಸಿದ್ಧಾಂತ ಪ್ರತಿಪಾದಿಸುವಂತಾಯಿತು. 1958-59ರಲ್ಲಿ 20 ವರ್ಷಗಳ ಸತತ ಸಂಶೋಧನಾನಂತರ ಬ್ಯೂಟೆನಾಂಟ್ ಮತ್ತು ಸಹೋದ್ಯೋಗಿಗಳು ರೇಷ್ಮೆ ಹುಳುವಿನ ಲೈಂಗಿಕಾ ಕರ್ಷಕ ವಸ್ತುವಿನ ಶುದ್ಧೀಕರಣದಲ್ಲಿ ಯಶಸ್ವಿಗಳಾದರು. ಈಗ ಫಿಯೋಕ್ರೋಮ್ ಎಂದು ಕರೆಯಲ್ಪಡುವ ಈ ವಸ್ತುವಿನ ರಾಸಾಯನಿಕಗಳ ಹಾಗೂ ವೈರಸುಗಳ ಮೇಲೆ ಈತ ಸಂಶೋಧನೆ ಮಾಡಿದ್ದಾನೆ.

	ಸ್ರಾವಕ ಗ್ರಂಥಿಗಳಿಂದ ಲೈಂಗಿಕ ಹಾರ್ಮೋನುಗಳನ್ನು ಪ್ರತ್ಯೇಕಿಸುವುದು, ಅವುಗಳ ಅಣುರಚನೆ, ಕಾರ್ಯಕ್ಷೇತ್ರ ಮತ್ತು ವಿಧಾನ ಈ ವಿಷಯವಾಗಿ ಸಂಶೋಧನೆ ನಡೆಸಲು ಪ್ರಾರಂಭಿಸಿ ಬ್ಯೂಟಿನಾಂಟ್ ಗರ್ಭಿಣಿ ಸ್ತ್ರೀಯರ ಮೂತ್ರದಿಂದ ಈಸ್ಟ್ರೊಜೆನ್ನನ್ನು ಪ್ರತ್ಯೇಕಿಸಿ ಶುದ್ಧ ರೂಪದಲ್ಲಿ ಹರಳಾಗಿ ಪಡೆದ (1929.) ಈ ಹಾರ್ಮೋನ್ ಸ್ತ್ರೀಯಲ್ಲಿ ಪ್ರಬುದ್ಧತೆಯ ತರುವಾಯ ಅಂಡಾಶಯಗಳಿಂದ ಸ್ರವಿಸಲ್ಪಡುವ ಮತ್ತು ಆಕೆಯ ಲೈಂಗಿಕ ವಿಕಾಸಕ್ಕೆ ಅತಿ ಮುಖ್ಯವಾಗಿ ಬೇಕಾಗುವ ವಸ್ತು. ಇದನ್ನು ಅಮೆರಿಕದ ಡಾಯ್ಸಿ ಎಂಬಾತ ಕೂಡ ಅದೇ ವೇಳೆ ಪ್ರತ್ಯೇಕಿಸಿದ್ದ. ಬ್ಯೂಟಿನಾಂಟ್ ಪುರುಷರ ಲೈಂಗಿಕ ಹಾರ್ಮೋನಾದ ಅಂಡ್ರೊಸ್ಟಿರೋನನ್ನು 1931ರಲ್ಲೂ ಗರ್ಭಿಣಿ ಸ್ಥಿತಿಗೆ ಅತಿ ಅವಶ್ಯವಾದ ಪ್ರೊಜೆಸ್ಟಿರೋನ್ ಎಂಬ ಸ್ತ್ರೀಲೈಂಗಿಕ ಹಾರ್ಮೋನನ್ನು 1934ರಲ್ಲೂ ಪ್ರತ್ಯೇಕಿಸಿದ. ಅಲ್ಲದೆ ಪ್ರೊಜೆಸ್ಟಿರೋನ್, ಪ್ರೆಗ್ನೇಂಡಿಯೋಲ್ ಮುಂತಾದ ಹಾರ್ಮೊನ್ ವಸ್ತುಗಳ ಅಣುರಚನೆಯನ್ನೂ ಪತ್ತೆಮಾಡಿದ. ಹೆಣ್ಣಿನ ಸಂತಾನೋತ್ಪತ್ತಿ ಕಾರ್ಯಗಳಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟಿರೋನುಗಳ ಪಾತ್ರ ವಿಶದೀಕರಿಸಿದ. ಈ ಹಾರ್ಮೋನುಗಳಿಗೆ ದಪ್ಪವಾಗಿ ಹೋಲುವ ಅನೇಕ ರಾಸಾಯನಿಕಗಳು ಏಡಿಗಂತಿಕಾರಕಗಳೆಂದು ತಿಳಿಸಿದ. ಇವೆಲ್ಲ ಪ್ರಯೋಗಗಳಿಂದ ಇಂದು ವೈದ್ಯವಿಜ್ಞಾನದಲ್ಲಿ ವಿಶೇಷವಾಗಿ ಬಳಕೆಯಲ್ಲಿರುವ ಕಾರ್ಟಿಸೋನಿನ ತಯಾರಿಕೆ ಸಾಧ್ಯವಾಗುವಂತಾಯಿತು.		(ಜಿ.ಎ.ಜಿ.; .ಎಸ್.ಆರ್.; ಇ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ